ಟರ್ಬೋ ಸಂಪೀಡಕ -
	ತಿರುಬಾನಿಂದ ಅಧಿಕ ವೇಗದಲ್ಲಿ ಚಾಲಿಸಲ್ಪಡುವ ಮತ್ತು ಸಾಮಾನ್ಯವಾಗಿ ವಿಮಾನದ ಎಂಜಿನ್ನುಗಳಲ್ಲಿ ಬಳಸುವ ಸಾಧನ (ಟರ್ಬೋ ಕಂಪ್ರೆಸರ್). ರಚನೆ ಹಾಗೂ ವಿನ್ಯಾಸಗಳಲ್ಲಿ ಇದು ಬೇರೆ ಯಾವುದೇ ಸಂಪೀಡಕದಂತೆಯೇ ಇದ್ದರೂ ಇದರ ಕ್ರಿಯಾ ವೇಗ ಅಶ್ವಸಾಮಥ್ರ್ಯ ಮುಂತಾದವುಗಳಲ್ಲಿ ಇದಕ್ಕೆ ಹಲವಾರು ವಿಶೇಷತೆಗಳಿವೆ. ಟರ್ಬೋ ಸಂಪೀಡಕಗಳಲ್ಲಿ ಮೂರು ವಿಧ: 1 ಅಪಕೇಂದ್ರಕ ಸಂಪೀಡಕಗಳು: 2 ಅಕ್ಷಪ್ರವಾಹೀಸಂಪೀಡಕಗಳು (ಆ್ಯಕ್ಸಿಯಲ್ ಪ್ಲೋ ಕಂಪ್ರೆಸರ್ಸ್): 3 ದ್ವಿಚಕ್ರ ಸಂಪೀಡಕಗಳು. 

	ಅಪಕೇಂದ್ರಕ ಸಂಪೀಡಕದ ಮುಖ್ಯಭಾಗಗಳು ಎರಡು: ತಿರುಗುವ ಅಲಗುಚಕ್ರ (ವೇನ್ ರೋಟರ್) ಮತ್ತು ಹೊರಕವಚ. ವಾಯುವನ್ನು ಒಳಸೆಳೆದ ಚಕ್ರ ಅದನ್ನು ತನ್ನ ಪರಿಧಿಗೆ ಅಭಿಮುಖವಾಗಿ ತಳ್ಳಿ ಒತ್ತಡವನ್ನು ಉಂಟುಮಾಡುತ್ತದೆ. ಇದನ್ನು ಒತ್ತಡ ನಷ್ಟವಾಗದಂತೆ ಹೊರಸಾಗಿಸುವ ಕಾರ್ಯ ಹೊರಕವಚದ್ದು. ಚಕ್ರದ ಪರಿಧಿಯ ಕಡೆಗೆ ತನ್ನ ಚಲನೆಯ ದಿಶೆಯನ್ನು ಬದಲಾಯಿಸುತ್ತದೆ. ಈ ಬದಲಾವಣೆ ಒಂದು ಅನನುಕೂಲತೆ. ಆದ್ದರಿಂದ 6.000 ಪೌಂಡಿಗಿಂತ ಹೆಚ್ಚು ನೂಕುಬಲವನ್ನು (ಥ್ರಸ್ಟ್) ಉಂಟುಮಾಡುವ ಜೆಟ್ಟುಗಳಲ್ಲಿ ಈ ಸಂಪೀಡಕಗಳನ್ನು  ಬಳಸಲು ಬರುವುದಿಲ್ಲ. ಅಕ್ಷಪ್ರವಾಹೀ ಸಂಪೀಡಕಗಳಲ್ಲಿ ವಾಯುವನ್ನು ಚಕ್ರ ತನ್ನ ಅಕ್ಷಕ್ಕೆ ಸಮಾಂತರವಾಗಿ ದಬ್ಟುತ್ತದೆ. ಹೀಗಾಗಿ ಈ ಸಂಪೀಡಕಗಳ ಕ್ರಿಯಾದಕ್ಷತೆ ಹೆಚ್ಚು. ಅಲ್ಲದೇ ಒಂದಕ್ಕಿಂತ ಹೆಚ್ಚು ಘಟಕಗಳಲ್ಲಿ ಸಂಪೀಡನ ಮಾಡುವುದು ಸಾಧ್ಯ. ಅದರೆ ಈ ಸಂಪೀಡಕಗಳ ಒಂದೊಂದು ಘಟಕದಲ್ಲೂ ಉಂಟುಮಾಡಬಹುದಾದ ಒತ್ತಡ ಬಲು ಕಡಿಮೆ. ಅಪಕೇಂದ್ರಕ ಸಂಪೀಡಕದಷ್ಟು ಹೆಚ್ಚು ಒತ್ತಡ ಮಾಡಲು ಹತ್ತರಿಂದ ಹದಿನೈದು ಘಟಕಗಳ ಅಗತ್ಯತೆ ಇರುವುದು, ದ್ವಿಚಕ್ರ ಸಂಪೀಡಕ ಒಂದು ರೀತಿಯ ಅಕ್ಷಪ್ರವಾಹೀ ಸಂಪೀಡಕ. ಇದರಲ್ಲಿ ಒಂದೇ ಅಕ್ಷದ ಸುತ್ತ ಬೇರೆ ಬೇರೆ ವಿನ್ಯಾಸದ ಎರಡು ಚಕ್ರಗಳು ಬೇರೆ ಬೇರೆ ವೇಗಗಳಲ್ಲಿ ತಿರುಗುತ್ತಿರುತ್ತವೆ. ಹೆಚ್ಚು ಒತ್ತಡವನ್ನು ವಾಯುವಿನ ಚಲನೆಯ ದಿಶೆಯನ್ನು ಬದಲಿಸದೆ ಪಡೆಯಲು ಸಾಧ್ಯ. ಏಕ ಕಾಲದಲ್ಲಿ ಒತ್ತಡವನ್ನು ಹತ್ತು ಪಟ್ಟು ಹೆಚ್ಚಿಸಲು ಇಲ್ಲಿ ಸಾಧ್ಯವಿದೆ. ಈ ಎರಡು ಚಕ್ರಗಳನ್ನು ಚಾಲಿಸಲು ಎರಡು ಬೇರೆ ಬೇರೆ ತಿರುಬಾನಿಗಳನ್ನು ಬಳಸುತ್ತಾರೆ. ಸುಮಾರು ಹತ್ತುಸಾವಿರ ಪೌಂಡುಗಳಷ್ಟು ನೂಕುಬಲ ನೀಡುವ ಜೆಟ್‍ಗಳಲ್ಲಿ ಈ ಸಂಪೀಡಕಗಳನ್ನು ಬಳಸಬಹುದು. 
(ಎ.ಆರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ